ಸಿಮ್ಲಾ
	ಭಾರತದ ಉತ್ತರದಲ್ಲಿರುವ ಹಿಮಾಚಲ ಪ್ರದೇಶ ರಾಜ್ಯದ ಒಂದು ಜಿಲ್ಲೆ ಮತ್ತು ರಾಜಧಾನಿ. ಜಿಲ್ಲೆಯ ಆಡಳಿತ ಕೇಂದ್ರನಗರ. ಜಿಲ್ಲಾವಿಸ್ತೀರ್ಣ 5131 ಚ.ಕಿ.ಮೀ. ಜನಸಂಖ್ಯೆ : 6,17,404. 

	ಇದು ಭಾರತದ ಹಿಮಾಲಯ ಪರ್ವತ ಪ್ರದೇಶದ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದು. ಹಿಮಾಚಲ ಪ್ರದೇಶ 1971 ಜನವರಿ 25ರಂದು ಭಾರತದ 18ನೆಯ ರಾಜ್ಯವಾಗಿ ಉದಯಿಸಿದೆ. ಸಿಮ್ಲಾ ಇದರ ರಾಜಧಾನಿ. ಗಿರಿಧಾಮಗಳ ರಾಣಿ ಎಂದು ಸಿಮ್ಲಾ ಪ್ರಸಿದ್ಧ. ಇದು ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಬೇಸಗೆಯ ರಾಜಧಾನಿಯಾಗಿತ್ತು. ಇದು ಸುಂದರ ಪ್ರಕೃತಿ ಸೌಂದರ್ಯವನ್ನೊಳಗೊಂಡಿದ್ದು ಪ್ರವಾಸಿಗರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸುವ ನಗರ. ಸಿಮ್ಲಾ ಪದ ಶ್ಯಾಮಲ ಎಂಬ ಪದದಿಂದ ಬಂದಿದ್ದು ಇದು ಅಲ್ಲಿಯ ಕಾಳೀದೇವತೆಯ ಹೆಸರಾಗಿದೆ. ಪಂಜಾಬ್, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ ಹಾಗೂ ಚಂಡೀಗಢ ಇವು ಸಿಮ್ಲಾವನ್ನು ಸುತ್ತುವರಿದಿವೆ. ಸಿಮ್ಲಾ 31º6 ಉ.ಅ ಹಾಗೂ 77º10 ಪೂ.ರೇ ದಲ್ಲಿದೆ. ಸಿಮ್ಲಾನಗರದ ವಿಸ್ತೀರ್ಣ 18 ಚ.ಕಿ.ಮೀ. ಈ ಪ್ರದೇಶ ಸಮುದ್ರಮಟ್ಟದಿಂದ 2213 ಮೀ ಎತ್ತರದಲ್ಲಿದೆ. ಸಿಮ್ಲಾ ನಗರ ಅರ್ಧಚಂದ್ರಾಕೃತಿಯ ಪರ್ವತ ಶ್ರೇಣಿಯಲ್ಲಿ ಹರಡಿದೆ. 

	ವಾಯುಗುಣ : ಇದು ತಂಪಾದ ವಾಯುಗುಣಹೊಂದಿದ್ದು ಎಲ್ಲಾ ಋತುಮಾನಗಳಲ್ಲಿ ನೋಡಬಹುದಾದ ಸ್ಥಳವಾಗಿದೆ. ಇಲ್ಲಿನ ಸಮೋಷ್ಣರೇಖೆ ಲಂಡನ್ ಪ್ರದೇಶವನ್ನು ಹೋಲುವುದರಿಂದಾಗಿ ಬ್ರಿಟಿಷರು ಈ ಪ್ರದೇಶವನ್ನು ಬೇಸಗೆಯ ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಈ ಪ್ರದೇಶದಲ್ಲಿ ಬೇಸಗೆಯ ಅವಧಿ ಮೇ - ಜೂನ್ ತಿಂಗಳವರೆಗೆ ಕಂಡುಬಂದು ಉಷ್ಣಾಂಶವು 15º - 28ºಸೆ ನಷ್ಟಿರುವುದು. ಈ ಅವಧಿಯಲ್ಲಿ ಇಲ್ಲಿನ ಜನರು ಹತ್ತಿಬಟ್ಟೆಯನ್ನು ಧರಿಸುತ್ತಾರೆ. ಮಳೆಗಾಲದ ಅವಧಿ ಜೂನ್ - ಸೆಪ್ಟೆಂಬರ್. ಉಷ್ಣಾಂಶ 12ºಸೆ - 22ºಸೆ ನಷ್ಟಿರುವುದು. ಶರತ್ಕಾಲ ಅಕ್ಟೋಬರ್ - ನವೆಂಬರ್. ಉಷ್ಣಾಂಶ 7ºಸೆ - 20ºಸೆ ನಷ್ಟಿರುವುದು. ವಸಂತಕಾಲ ಮಾರ್ಚ್ - ಏಪ್ರಿಲ್. ಉಷ್ಣಾಂಶ 11ºಸೆ - 20ºಸೆ ನಷ್ಟಿರುವುದು. ಚಳಿಗಾಲದ ಅವಧಿ ಡಿಸೆಂಬರ್ - ಫೆಬ್ರವರಿ. ಆಗ ಉಷ್ಣಾಂಶ -4º -7ºಸೆ ನಷ್ಟಿರುವುದು. 

	ಸಸ್ಯವರ್ಗ : ಸಿಮ್ಲಾ ಪ್ರದೇಶದಲ್ಲಿ ಮೊನಚಾದ ಎಲೆಯ ಸಸ್ಯವರ್ಗವಿದೆ. ಈ ಪ್ರದೇಶದಲ್ಲಿ ಅತ್ಯಂತ ಎತ್ತರ ಮರಗಳಿದ್ದು ಇದರ ಎಲೆ ಮತ್ತು ರೆಂಬೆಗಳ ಮೇಲೆ ಸಂಗ್ರಹಗೊಂಡ ಹಿಮದ ದೃಶ್ಯ ಸುಂದರವಾದದ್ದು. ಈ ಪ್ರದೇಶದಲ್ಲಿ ಪೈನ್, ದೇವದಾರು, ಓಕ್ ಮತ್ತು ರೊಟೊಡೆಂಡ್ರಾಸ್ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತವೆ. 

	ಸಾರಿಗೆ : ಸಿಮ್ಲಾ ರಸ್ತೆ, ರೈಲು ಮತ್ತು ವಾಯುಸಾರಿಗೆ ಸಂಪರ್ಕ ಹೊಂದಿದೆ. ಇದು ಭಾರತದ ಪ್ರಸಿದ್ಧ ಪರ್ವತ ಪ್ರದೇಶವಾಗಿದ್ದು ಸುಲಭ ಸಂಪರ್ಕ ವ್ಯವಸ್ಥೆ ಹೊಂದಿದೆ. ನಗರದ ಎಲ್ಲ ವಿಧವಾದ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ. ನ್ಯಾರೋಗೇಜ್ ರೈಲು ಮಾರ್ಗ ಚಂಡೀಗಢ ಸಮೀಪದ ಕಲ್ಕದಿಂದ ಸಿಮ್ಲಾದವರೆಗೆ ಸು. 90ಕಿಮೀ ನಷ್ಟಿದೆ. ಈ ರೈಲ್ವೇಹಳಿಯನ್ನು 1924ರಲ್ಲಿ ನಿರ್ಮಿಸಿದ್ದು ಮೊದಲು ಆಟದ ರೈಲಾಗಿದ್ದು ಈ ಎರಡು ಕೇಂದ್ರಗಳ ನಡುವೆಯಿತ್ತು. ಈ ಮಾರ್ಗ ಸು. 105 ವೈವಿಧ್ಯಮಯ ಮತ್ತು ಸುಂದರ ಸುರಂಗಮಾರ್ಗವನ್ನು ಒಳಗೊಂಡಿದೆ. ಕಲ್ಕದಿಂದ ಸಿಮ್ಲಾ ತಲುಪಲು ಈ ರೈಲು ಮಾರ್ಗ 6 ಗಂಟೆ ಅವಧಿ ತೆಗೆದುಕೊಳ್ಳುತ್ತದೆ. ಈ ಮಾರ್ಗದುದ್ದಕ್ಕೂ ಸುಂದರ ಪರ್ವತ ಸಾಲುಗಳಿದ್ದು ಪ್ರವಾಸಿಗರ ಕಣ್ಮನ ತಣಿಸುವುವು. ಸಿಮ್ಲಾ ದೆಹಲಿಯಿಂದ 365 ಕಿಮೀ, ಚಂಡೀಗಢದಿಂದ 117ಕಿಮೀ, ಅಂಬಾಲದಿಂದ 166 ಕಿಮೀ, ಮನಾಲಿಯಿಂದ 280 ಕಿಮೀ ದೂರದಲ್ಲಿದೆ. ಸಿಮ್ಲಾದಿಂದ 23 ಕಿಮೀ ದೂರದಲ್ಲಿ ಜುಬ್ಬರ್‍ಹಟ್ಟಿ ಎಂಬಲ್ಲಿ ವಿಮಾನ ನಿಲ್ದಾಣವಿದೆ. ಈ ನಿಲ್ದಾಣದಿಂದ ದೆಹಲಿ, ಚಂಡೀಗಢ, ಕಾಂಗ್ರ ಮತ್ತು ಕುಲು ಸ್ಥಳಗಳಿಗೆ ಸಂಪರ್ಕವಿದೆ. 

	ಭಾಷೆ : ಇಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ಬಳಕೆಯಿದೆ. ಜೊತೆಗೆ ಪಂಜಾಬಿ ಮತ್ತು ಪಹರಿ ಭಾಷೆಗಳನ್ನು ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಜನರು ಈ ಪ್ರದೇಶದಲ್ಲಿ ಕಂಡುಬರುತ್ತಾರೆ. 

	ವ್ಯಾಪಾರ : ಸಿಮ್ಲಾ ಕರಕುಶಲ ವಸ್ತುಗಳ ಮಾರುಕಟ್ಟೆ. ಉಲ್ಲನ್ ಮತ್ತು ಪಾಶ್‍ಮಿನಾಶಾಲು, ಅಲಂಕರಣ ಸಾಮಗ್ರಿ, ಕೈಯಿಂದ ಮಾಡಿದ ಗೊಂಬೆಗಳು, ಉಲ್ಲನ್ ಟೋಪಿಗಳು, ಊರೆಗೋಲು, ಆಟದ ಸಾಮಾನು ಮುಂತಾದುವುಗಳನ್ನು ತಯಾರಿಸುತ್ತಾರೆ. ಟಿಬೆಟಿಯನ್ನರ ಆಭರಣಗಳೂ ಚಿಕ್ಕ ಒಡವೆಗಳೂ ದೊರೆಯುತ್ತವೆ. 

	ಕ್ರೀಡೆ : ಸಿಮ್ಲಾದಲ್ಲಿ ಮಾತ್ರ ಹಿಮದ ಮೇಲೆ ಜಾರುವ ಭಾರತದಲ್ಲಿ ಸ್ವಾಭಾವಿಕ ಮೈದಾನವಿದೆ. ಇಲ್ಲಿನ ಹಿಮದ ಮೇಲೆ ಜಾರುವ ಒಕ್ಕೂಟ ಅಥವಾ ಸಂಘ ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಹಿಮದ ಮೇಲೆ ಜಾರುವ ಮನರಂಜನ ವಿಹಾರೋತ್ಸವವನ್ನು ಏರ್ಪಡಿಸುವುದು. ಈ ಸ್ಪರ್ಧೆಯಲ್ಲಿ ದೇಶದ ನಾನಾ ಭಾಗದವರು ಭಾಗವಹಿಸುವರು. ಈ ಸ್ಪರ್ಧೆಗೆ ಹಿಮಾಚಲ ಪ್ರದೇಶದ ವಿವಿಧ ಸ್ಥಳಗಳಿಂದ ಹಾಗೂ ವಿವಿಧ ರಾಜ್ಯಗಳಿಂದ ಬರುವ ಆಹ್ವಾನಿತರು ಹಾಡು ಮತ್ತು ನೃತ್ಯಗಳಿಂದ ಪ್ರೇಕ್ಷಕರ, ಪ್ರವಾಸಿಗರ ಮನರಂಜಿಸುತ್ತಾರೆ. 

	ಸಿಮ್ಲಾದ ಸುತ್ತುಮುತ್ತಲ ಪ್ರವಾಸಿ ಸ್ಥಳಗಳಲ್ಲಿ ಮಾಲ್ ಎಂಬುದು ಸಿಮ್ಲಾದ ಪ್ರಮುಖ ವ್ಯಾಪಾರ ಸ್ಥಳ. ಇದು ಪ್ರವಾಸಿಗರಿಗೆ ಒಂದು ನಗರದಲ್ಲಿ ದೊರಕುವ ಎಲ್ಲಾ ಸುಖಸಂತೋಷಗಳ ತಾಣಗಳನ್ನು ಹೊಂದಿದೆ. ಮಾಲ್‍ನಲ್ಲಿರುವ ಪರ್ವತಸರಣಿ ಮತ್ತು ಸ್ಕ್ಯಾಂಡಲ್ ಪಾಯಿಂಟ್ ಆಕರ್ಷಕ ಸ್ಥಳಗಳು. ಸ್ಕ್ಯಾಂಡಲ್ ಪಾಯಿಂಟ್ ಮಾಲ್‍ನ ಅತ್ಯುನ್ನತ ಎತ್ತರ ಪ್ರದೇಶ. ಇಲ್ಲಿ ಉತ್ತರ ಭಾರತದ ಹಳೆಯ ಕ್ರೈಸ್ತ ಚರ್ಚ್ ಇದೆ. ರಂಗುರಂಗಿನ ಗಾಜಿನ ಕಿಟಕಿಗಳನ್ನು ಹೊಂದಿರುವ ಈ ಚರ್ಚ್ ಅನ್ನು 1846 - 1857ರಲ್ಲಿ ಕಟ್ಟಲಾಗಿದೆ. ಸಿಮ್ಲಾದಿಂದ 2 ಕಿಮೀ ದೂರದಲ್ಲಿರುವ ಔಕುಹಿಲ್ ಸು. 2,455 ಮೀ. ಎತ್ತರವಾಗಿದೆ. ಈ ಬೆಟ್ಟದ ಮೇಲೆ ಪ್ರಾಚೀನ ಹನುಮಾನ್ ದೇವಾಲಯವಿದೆ. ಇಲ್ಲಿರುವ ಹಿಮಾಚಲ ರಾಜ್ಯದ ವಸ್ತುಪ್ರದರ್ಶನಾಲಯವನ್ನು 1974ರಲ್ಲಿ ಪ್ರಾರಂಭಿಸಲಾಯಿತು. ಇಲ್ಲಿ ಪಹರಿ ಚಿತ್ರಕಲೆ, ಶಿಲ್ಪಕಲೆ, ಕಂಚು ಮತ್ತು ಮರದ ಕೆತ್ತನೆಗಳು, ವಸ್ತ್ರವಿನ್ಯಾಸ ಮತ್ತು ಆಭರಣಗಳನ್ನು ಇರಿಸಲಾಗಿದೆ. 

	1884-88ರಲ್ಲಿ ಕಟ್ಟಲಾದ ವಿಶಾಲವೂ ಸುಂದರವೂ ಆದ ವೈಸ್ ರೀಗಲ್ ಲಾಡ್ಜ್‍ನಲ್ಲಿ ಪ್ರಸಿದ್ಧವಾದ ಭಾರತ ಅಭಿವೃದ್ಧಿ ಅಧ್ಯಯನ ಸಂಸ್ಥೆಯಿದೆ. ಸಿಮ್ಲಾದಿಂದ 5 ಕಿಮೀ ದೂರದಲ್ಲಿರುವ ಸಮ್ಮರ್‍ಹಿಲ್ 1,979ಮೀ ಎತ್ತರವಿದೆ. ಸಿಮ್ಲಾ ಮತ್ತು ಕಲ್ಕ ರೈಲ್ವೇಲೈನ್ ಹತ್ತಿರವಿರುವ ಈ ಸುಂದರ ಸ್ಥಳದಲ್ಲೆ ಮಹಾತ್ಮಗಾಂಧೀಯವರು ಸಿಮ್ಲಾಗೆ ಭೇಟಿ ನೀಡಿದಾಗ ಉಳಿದುಕೊಳ್ಳುತ್ತಿದ್ದರು. ಇಲ್ಲಿ ಹಿಮಾಚಲಪ್ರದೇಶದ ವಿಶ್ವವಿದ್ಯಾಲಯವಿದೆ. ಸಿಮ್ಲಾದಿಂದ 4 ಕಿಮೀ ದೂರದಲ್ಲಿ ಅನನ್‍ದಾಲ್ ಆಟದ ಮೈದಾನವಿದೆ. ಇದು ಕ್ರಿಕೆಟ್ ಮತ್ತು ಪೋಲೋ ಆಟಗಾರರಿಗೆ ಅತ್ಯಂತ ಪ್ರಿಯವಾದ ಸ್ಥಳ. ತಾರಾದೇವಿ ಬೆಟ್ಟದ ಮೇಲೆ ಈ ದೇವತೆಯ ದೇವಾಲಯವಿದ್ದು, ಇದು ಸಿಮ್ಲಾದಿಂದ 11 ಕಿಮೀ ದೂರದಲ್ಲಿದೆ. ಇಲ್ಲಿ ಮಿಲಿಟರಿ ಮತ್ತು ಭಾರತದ ಸ್ಕೌಟ್ ಮತ್ತು ಗೈಡ್ಸ್‍ನ ಪ್ರಮುಖ ಕೇಂದ್ರಗಳಿವೆ. ಇವುಗಳ ಜೊತೆಗೆ ಸಿಮ್ಲಾದ ಸುತ್ತಮುತ್ತ ಇರುವ ಸಂಕಟ್ ಮೋಚನ್ ಮಶೋಬ್ರ, ಕುಫ್ರೀ, ನಲ್‍ದೆಹ್ರ ಹಾಗೂ ಚಾಯಿಲ್ ಇಲ್ಲಿನ ಪ್ರಸಿದ್ಧ ಪ್ರವಾಸೀ ತಾಣಗಳಾಗಿವೆ. 	

	ಸಿಮ್ಲಾದಿಂದ 45 ಕಿಮೀ ದೂರವಿರುವ ಚಾಯಿಲನ್ನು ಪರ್ವತ ಸ್ವರ್ಗ ಎಂದು ಕರೆಯುವರು. ಹಿಂದೆ ಇದು ಪಾಟಿಯಾಲ ಮಹಾರಾಜರ ಬೇಸಗೆ ರಾಜಧಾನಿಯಾಗಿತ್ತು. ಇಲ್ಲಿನ ಅರಣ್ಯದಲ್ಲಿ ವಿವಿಧ ಜಾತಿಯ ಪಕ್ಷಿಗಳು ಹಾಗೂ ಜಿಂಕೆ, ಸಾರಂಗ, ಕಡವೆ ಮುಂತಾದವುಗಳಿವೆ. ಪ್ರಪಂಚದಲ್ಲೇ ಬಹು ಎತ್ತರದಲ್ಲಿರುವ ಕ್ರಿಕೆಟ್ ಮೈದಾನವು ಇಲ್ಲಿದೆ.		
			(ಡಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ